ಫೈಬ್ರೊ ಕ್ಯಾಲಕ್ಯುಲಸ್ ಪ್ಯಾನ್ ಕ್ರಿಯಾಟಿಕ್ ಡಯಾಬಿಟಿಸ್
ಡೈಯಬಿಟಿಸ್ (Fibro Calculous Pancreatic diabetes & FCPD) (ಎಫ್.ಸಿ.ಪಿ.ಡಿ)
ಇದೊಂದು ಪ್ರಕಾರದ ಡೈಯಬಿಟಿಸ್ ರೋಗ ನಾವು ಮೊದಲು ಭಾವಿಸಿದಂತೆ ಡೈಯಬಿಟಿಸ್ ಎಂದರೆ ಒಂದೇ ಪ್ರಕಾರದ ರೋಗವಲ್ಲ. ಅದರಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಪ್ರಕಾರಗಳಿವೆ. ಇಂಥದೊಂದು ರೋಗವಿದೆಯೆಂದು ಜಾಗತಿಕ ಆರೋಗ್ಯ ಸಂಸ್ಥೆಯವರು ಒಪ್ಪಿರಲೇ ಇಲ್ಲ. ಆದರೆ ಇಂಥದೊಂದು ಪ್ರಕಾರ ಇದೆ ಎಂದು ಭಾರತೀಯರು ವಾದಿಸಿದರು. ಇಂಥ ರೋಗಿಗಳನ್ನು ಜಗತ್ತಿನ ಎದುರು ನಿಲ್ಲಿಸಿ ತೋರಿಸಿದರು. 1985ರ ನಂತರ ಜಾಗತಿಕ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿತು. ಈ ವಿಶಿಷ್ಠ ಡೈಯಾಬಿಟಿಸ್ ಮೇಲೆ ಭಾರತೀಯರು ಇನ್ನೂ ಸಂಶೋಧನೆಗಳನ್ನು ನಡೆಸಿದ್ದಾರೆ. ರೋಗ ಯಾಕೆ ಬರುತ್ತದೆ ಎಂಬ ಸಂಗತಿ ಇನ್ನೂ ಖಚಿತವಾಗಿಲ್ಲ.

ಈ ರೋಗ ಜೀವನದ ಮೊದಲ ಹತ್ತು ವರ್ಷಗಳಲ್ಲಿ ಹುಟ್ಟಲು ಪ್ರಾರಂಭಿಸುವರು. ಎರಡನೇ ದಶಕದಲ್ಲಿ ಪ್ರಕಟವಾಗುವದು. ರೋಗಿಗೆ ಹೊಟ್ಟೆನೋವು, ಕಾಣುವುದು. ಹೊಟ್ಟೆಯ ಎಕ್ಸರೇ ತೆಗೆಸಿದರೆ ಸ್ವಾದಪಿಂಡದಲ್ಲಿ ಹರಳುಗಳು ಇದ್ದದ್ದು ಗೋಚರಿಸುತ್ತದೆ. ರಕ್ತ ಪರೀಕ್ಷಿಸಿದರೆ ಸಕ್ಕರೆ ಜಾಸ್ತಿ ಇರುತ್ತದೆ. ಮೂತ್ರದಲ್ಲಿ ಸಕ್ಕರೆ ಸೋರುತ್ತಿರುವದು. ರೋಗ ನಿದಾನವು ಸುಲಭವಾಗಿ ಆಗುವದು. ಇಂಥ ರೋಗಿಯ ಸ್ವಾದಪಿಂಡವನ್ನು ಪರೀಕ್ಷಿಸಿದರೆ ಅದರ ನಾಳಗಳು ಹಿರಿದಾಗಿರುತ್ತವೆ. ಸ್ವಾದ ಪಿಂಡದ ಗ್ರಂಥಿಗಳೆಲ್ಲ ಮಾಯವಾಗಿ ಅಲ್ಲಿ ನಾರಿನ ಅಂಗಾಂಶ ಜಾಸ್ತಿಯಾಗಿರುತ್ತದೆ. ಒಂದೊಂದು ಸಲವಂತೂ ಸ್ವಾದಪಿಂಡ ಹೋಗಿ ಸ್ವಾದ ಚೀಲವಾಗಿರಬಹುದು.

ಈ ರೋಗಿಗಳಲ್ಲಿ ಕಂಡ ಡೈಯಬಿಟಿಸ್ ಉಗ್ರವಾಗಿದ್ದು ಇದನ್ನು ಉಪಚರಿಸಲು ಇನ್ಸುಲಿನ್ ಸ್ರವಿಕೆ ಅವಶ್ಯಬೇಕು. ಕ್ವಚಿತ್ತಾಗಿ ಈ ರೋಗಿಗಳು ಕೀಟೋನ್ ಕಣಗಳನ್ನು ರಕ್ತದಲ್ಲಿ ಪಡೆಯಬಹುದು. ಈ ರೋಗಿಗಳ ದೈಹಿಕ ಆರೋಗ್ಯ ಹದಗೆಡುತ್ತ ಬಂದು ಇವರು ಮರಣ ಹೊಂದುವರು.

ಈ ರೋಗಿಗಳ ಡೈಯಬಿಟಿಸ್ ತೊಂದರೆ ಉಪಚರಿಸಲು ಸಾಧ್ಯ. ಆದರೆ ಸ್ವಾದ ಪಿಂಡದಲ್ಲಿ ಆದ ಬದಲಾವಣೆಗಳನ್ನು ಸುಧಾರಿಸಲು, ಸ್ಥಗಿತಗೊಳಿಸಲು ಸಾಧ್ಯವಾಗಿಲ್ಲ. ರೋಗಕ್ಕೆ ಕಾರಣವೇನು ಎಂಬ ಸಂಗತಿಯು ನಿಚ್ಚಳವಾಗಿಲ್ಲ.

ಈ ರೋಗದ ಇರವು ಮೊಟ್ಟ ಮೊದಲು ಇಂಡೊನೇಶಿಯಾದಲ್ಲಿ ಗುರುತಿಸಲ್ಪಟ್ಟಿತು. ನಂತರ ರೋಗ ಕೇರಳದಲ್ಲಿ ಇದೆ ಎಂದು ಜೀ ವರ್ಗೀಸ ಎಂಬ ವೈದ್ಯರು ಜಗತ್ತಿಗೆ ಸಾರಿದರು. ರೋಗ ಕೇವಲ ಕೇರಳದಲ್ಲಿ ಮಾತ್ರ ಇದೆ ಎಂಬ ಕಲ್ಪನೆಯಿಂದ ಇವರು ರೋಗವನ್ನು ಕೇರಳೀ ಸ್ವಾದ ಪಿಂಡ ಡೈಯಬಿಟಿಸ್ ಎಂದು ಹೆಸರಿಟ್ಟರು. ಮುಂದಿನ ಕೆಲ ವರ್ಷಗಳಲ್ಲಿ ಈ ರೋಗ, ಒರಿಸ್ಸಾ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳನಾಡುಗಳಲ್ಲಿ ಸಹ ಇರುವುದು ಗೊತ್ತಾಗಿ ಕೇರಳೀ ಡೈಯಬಿಟಿಸ್ ಹೆಸರು ಹಿಂತೆಗೆದುಕೊಳ್ಳಲ್ಪಟ್ಟಿತು. ಈಗ ಈ ರೋಗಕ್ಕೆ ಎಫ್.ಸಿ.ಪಿ.ಡಿ ರೋಗವೆಂದೇ ಜಗತ್ತು ಹೆಸರಿಟ್ಟಿದೆ. ಡಾ. ಸ.ಜ. ನಾಗಲೋಟಿಮಠ ಎಂಬ ಕರ್ನಾಟಕದ ಪೆಥಾಲೊಜಿಸ್ಟ ವಿವರಿಸಿದ ರೋಗದ ವರ್ಣನೆ ಇಡೀ ಜಗತ್ತಿನಲ್ಲಿ ಮಾನ್ಯವಾಗಿದೆ. ರೋಗಿಗಳ ಬಗ್ಗೆ ಚೆನ್ನೈನ ಡಾ. ಮೋಹನ, ತ್ರಿವ್ಯಾಂದ್ರಮ್‍ನ ಡಾ. ಬಾಲಕೃಷ್ಣ, ಓರಿಸ್ಸಾದ ಡಾ. ತ್ರಿಪಾಠಿ ಮುಂತಾದವರು ಬಹಳ ಆಳವಾಗಿ ಅಭ್ಯಸಿಸಿದ್ದಾರೆ. ರೋಗದ ಬಗ್ಗೆ ಅಧ್ಯಯನವನ್ನು ಮುಂದುವರೆಸಿದ್ದಾರೆ. 				
(ಡಾ. ಎಸ್.ಜೆ. ನಾಗಲೋಟಿಮಠ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ